ಅಳಿಲು
ಸಾಮಾನ್ಯವಾಗಿ ಗಿಡಮರಗಳಲ್ಲಿ ವಾಸಿಸುವ ಸಸ್ತನಿ (ಸ್ಕ್ವಿರಲ್). ಇಣಚಿ ಎಂಬ ಹೆಸರೂ ಇದೆ. ವಿವಿಧ ಬಣ್ಣಗಳಲ್ಲಿ ಕಾಣುವ ಇದು ಗಾತ್ರದಲ್ಲಿ ಇಲಿಯಷ್ಟು ಚಿಕ್ಕದೂ, ಬೆಕ್ಕಿನಷ್ಟು ದೊಡ್ಡದೂ ಇರಬಹುದು.  ಶಕ್ತಿಯುತವಾದ ಸ್ನಾಯುಗಳಿಂದ ಕೂಡಿದ ದೇಹ, ಬಾಗಿಕೊಂಡ ಚೂಪಾದ ನಖ, ದೊಡ್ಡ ಕಣ್ಣು, ದಪ್ಪನಾದ ಕಿವಿ, ಉದ್ದವಾದ ಕೂದಲುಳ್ಳ ಗಡುತರವಾದ ಚಪ್ಪಟೆ ಬಾಲ-ಇವು ಅದರ ಕೆಲವು ಮುಖ್ಯ ಲಕ್ಷಣಗಳು.  ಇದು ತನ್ನ ಗೂಡನ್ನು ಕಡ್ಡಿ, ಎಲೆಗಳಿಂದ ಕಟ್ಟುವುದು.  ಗಿಡದ ಚಿಗುರು ಎಲೆ ಬೀಜ ಹಣ್ಣು ಇಲಿ ಪಕ್ಷಿ ಕೀಟಕ ತತ್ತಿ-ಇಂಥ ವಸ್ತುಗಳೇ ಇದರ ಆಹಾರ.  ಅಳಿಲು ವರ್ಷದಲ್ಲಿ ಒಮ್ಮೆ ಇಲ್ಲವೆ ಎರಡು ಬಾರಿ ಮರಿ ಹಾಕುತ್ತದೆ.  ಪ್ರತಿಸಲವೂ ಎರಡರಿಂದ ಆರು ಮರಿಗಳಿರಬಹುದು. ಮರಿಗಳು ಕೂದಲಿಲ್ಲದ, ಕಣ್ಣು ತೆರೆಯದ ಅಸಹಾಯಕ ಪ್ರಾಣಿಗಳಾಗಿರುತ್ತವೆ.  ಮರಿ ಓಡಾಡಲು ಶಕ್ತವಾಗುವವರೆಗೆ ತಾಯಿ ಮೊಲೆಯೂಡಿಸಿ ಸಾಕುತ್ತದೆ. 

	ಮರದ ಒಂದು ಟೊಂಗೆಯಿಂದ ಇನ್ನೊಂದು ಟೊಂಗೆಗೆ ಹಾರಬಲ್ಲ ಅಳಿಲು ಇದೆ. ಇದನ್ನು ಹಾರುವ  ಅಳಿಲೆಂದೇ ಕರೆಯುತ್ತಾರೆ. ಎರಡೂ ಬದಿಗೆ ಪಸರಿಸಿಕೊಂಡು ಸಡಿಲಾದ ಪ್ಯಾರಾಚೂಟ್‍ನಂಥ ಚರ್ಮವೇ ಇದರ ರೆಕ್ಕೆ.  ಅಳಿಲು ಆಸ್ಟ್ರೇಲಿಯಾ ಮತ್ತು ಮಡಗಾಸ್ಕರಗಳನ್ನು ಬಿಟ್ಟು ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ವಾಸಿಸುವುದು. ನಮ್ಮ ದೇಶದಲ್ಲಿ ವಾಸಿಸುವ ಅಳಿಲಿನ ಬೆನ್ನ ಮೇಲೆ ಮುರು ಪಟ್ಟೆಗಳಿರುವುದು ಒಂದು ವೈಶಿಷ್ಟ್ಯ.  ಅಳಿಲು ರೊಡೆನ್ಸಿಯ ಉಪವರ್ಗದ ಸ್ಕ್ವಿರಿಡೆ ಎಂಬ ಕುಟುಂಬಕ್ಕೆ ಸೇರಿದೆ. (ನೋಡಿ- ಇಣಚಿ)   
                  							
(ಎಸ್.ಬಿ.ಎಂ.)

ಶ್ರೀರಾಮಚಂದ್ರನ ಅನುಯಾಯಿಗಳಾದ ವಾನರರು ಲಂಕೆಗೆ ಸೇತುವೆ ಕಟ್ಟುತ್ತಿದ್ದಾಗ ಒಂದು ಅಳಿಲು ನೀರಿನಲ್ಲಿ ಬೀಳುವುದು, ಮರಳವೇಲೆ ಹೊರಳುವುದು, ಸೇತುವೆ ಮೇಲೆ ಹೋಗಿ ಮೈ ಕೊಡಹಿ ಮರಳ ಕಣ ಉದುರಿಸುವುದು; ಹೀಗೆ ಶ್ರದ್ಧೆ ಭಕ್ತಿಗಳಿಂದ ತನ್ನ ಪಾಲಿನ ಕರ್ತವ್ಯ ನಿರ್ವಹಿಸುತ್ತಿತ್ತು.  ಇದನ್ನು ಕಂಡು ಮೆಚ್ಚಿದ ಶ್ರೀರಾಮಚಂದ್ರ ಪ್ರೀತಿ ಕೃತಜ್ಞತೆಗಳಿಂದ ಅಳಿಲಿನ ಬೆನ್ನು ಸವರಿದ.  ಅಳಿಲಿನ ಬೆನ್ನ ಮೇಲೆ ಮೂರು ಗೆರೆಗಳು ಬಂದಿವೆಯೆಂದು ಭಾವುಕರು ನಂಬುತ್ತಾರೆ.  ಶ್ರದ್ಧೆ ಭಕ್ತಿಪೂರಿತವಾಗಿ ಘನೋದ್ಧೇಶ ಪ್ರದೀಪ್ತವಾಗಿ ನಿರ್ವಹಿಸಿದ ಕ್ರಿಯೆಗೆ ಅಳಿಲ ಸೇವೆ ಎಂದು ಸಾಹಿತ್ಯದಲ್ಲಿ ಪ್ರಯೋಗವಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ